ಸಂಘದ 2020-21ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್‌ರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ “ಸಂಘವು ಪ್ರಸ್ತುತ 19 ಶಾಖೆಗಳನ್ನು ಹೊಂದಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಸಹಿತ 5 ಜಿಲ್ಲೆಗಳಿಗೆ ವ್ಯಾಪಿಸಿರುತ್ತದೆ. ಸಂಘವು 2021-22 ನೇ ಆರ್ಥಿಕ ಸಾಲಿನಲ್ಲಿ ಇಂದಿನವರೆಗೆ ರೂ. 154 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು, ಅದನ್ನು ಮಾರ್ಚ್ ಅಂತ್ಯಕ್ಕೆ ರೂ. 175 ಕೋಟಿ ಠೇವಣಿ ಸಂಗ್ರಹದ ಗುರಿಯನ್ನು ಹೊಂದಿದೆ” ಎಂದು ಸಭೆಗೆ ತಿಳಿಸಿದರು. ಸಂಘದ ಸ್ವಂತ ಆಡಳಿತ ಕಚೇರಿ ಹಾಗೂ ಹಾಸ್ಟೆಲ್ ಕಟ್ಟಡದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಅತೀ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ. ದಶಮಾನೋತ್ಸವ ಸಂಧರ್ಭದಲ್ಲಿ ಹತ್ತು ಸಾವಿರ ಚದರ ಅಡಿಯ ಸ್ವಂತ ಕಟ್ಟಡ ಹೊಂದುತ್ತಿರುವ ಜಿಲ್ಲೆಯ ಏಕೈಕ ಸಹಕಾರ ಸಂಘ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.
ಸ0ಘವು ವರದಿ ಸಾಲಿಗೆ ವಾರ್ಷಿಕ ವಹಿವಾಟು ರೂ.858.43 ಕೋಟಿಗೂ ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ. 121.19 ಲಕ್ಷ ಷೇರು ಬಂಡವಾಳ, ರೂ 13716.66ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ. 11246.33ಲಕ್ಷ ಸಾಲ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಠೇವಣಿ ಸಂಗ್ರಹಣೆಯಲ್ಲಿ ಶೇ. 62.65ರಷ್ಟು ಮತ್ತು ಸಾಲ ವಿತರಣೆಯಲ್ಲಿ ಶೇ.53.86 ರಷ್ಟು ವೃದ್ಧಿಯಾಗಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 14280.50 ಲಕ್ಷ ಹೊಂದಿದೆ. ವರದಿ ವರ್ಷಕ್ಕೆ ಸಂಘವು ರೂ. 141.33 ಲಕ್ಷ ನಿವ್ವಳ ಲಾಭಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ.
2020-21 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವಾಂಗೀಣ ಸಾಧನೆಯನ್ನು ಪರಿಗಣಿಸಿ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಮ್ಮ ಸಂಘಕ್ಕೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರ ಜೊತೆಗೆ ಅಖಿಲ ಭಾರತ ಸಹಕಾರಿ ಸಪ್ತಾಹ-2021 ರಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡ ರಾಜ್ಯದ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ 2019-20 ಈ ಬಾರಿಯೂ ಸಂಘವು ಪಡೆದಿದ್ದು, ಸತತ 5 ವರ್ಷಗಳಿಂದ ಈ ಪ್ರಶಸ್ತಿಗೆ ಭಾಜನವಾಗಿದೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಾಮನ್ ಕೆ. ಶ್ರೀ ಜಿ.ಪರಮೇಶ್ವರ ಪೂಜಾರಿ, ಶ್ರೀ ಆನಂದ್ ಎಸ್ ಕೊಂಡಾಣ, ಶ್ರೀ ಸುರೇಶ್ ವಿ ಪೂಜಾರಿ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ ಮತ್ತು ಶ್ರೀಮತಿ ಕುಶಲಾಕ್ಷಿ ಯಶವಂತ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್‌ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ರವರು ವಂದಿಸಿದರು.