ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಹಕಾರಿ ವ್ಯವಸ್ಥೆಯ ಮೂಲಕ 30.86 ಲಕ್ಷರೈತರಿಗೆ 20,810 ಕೋ. ರೂ. ಸಾಲ ವಿತರಿಸುವ ಗುರಿ ಇದ್ದು , ಈಗಾಗಲೇ 20 ಲಕ್ಷರೈತರಿಗೆ 14000 ಕೋಟಿ. ರೂ ಸಾಲ ವಿತರಿಸಲಾಗಿದೆ. ಇನ್ನುಳಿದ ರೈತರಿಗೆ ಸಾಲ ವಿತರಣೆಯನ್ನು ಮಾ.25 ರೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.


ಅವರು ರವಿವಾರ ಮಂಗಳೂರಿನ ಪಡೀಲ್ ಬೈರಾಡಿಕೆರೆಯ ಬಳಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಆಡಳಿತ ಕಚೇರಿ ಮತ್ತು ಹಾಸ್ಟಲ್ ಒಳಗೊಂಡ 10 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡ ‘ಆತ್ಮಶಕ್ತಿ ಸೌಧ’ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿ ಸಭಾಭವನವನ್ನು ಸಂಸದ ನಳಿನ್‌ಕುಮಾರ್ ಕಟೀಲು, ಕೇಂದ್ರಕಚೇರಿಯ ಶಾಖೆಯನ್ನು ಶಾಸಕ ಉಮಾನಾಥ ಕೋಟ್ಯಾನ್, ಆಡಳಿತ ಕಚೇರಿಯನ್ನು ವಿಧಾನ ಪರಿಷತ್ ಸದಸ್ಯ ಹರೀಶಕುಮಾರ್, ಹಾಸ್ಟೆಲ್ ಕಟ್ಟಡವನ್ನು ಕಿಯಾನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಭದ್ರತೆ ಕೊಠಡಿಯನ್ನು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಬೋರ್ಡ್ ರೂಮನ್ನು ರಾಷ್ಟಿಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ ಉದ್ಘಾಟಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಎಲ್ಲರಂಗಗಳಲ್ಲಿಯೂ ಪ್ರತೀ ವರ್ಷ ಬೆಳವಣಿಗೆ ದಾಖಲಿಸಿದೆ. ಶೇ. 15 ಡಿವಿಡೆಂಡ್ ಪಾವತಿಸುತ್ತಿದೆ. 20 ಶಾಖೆಗಳ ಪ್ರಾರಂಭ, ಸ್ವಂತಕಟ್ಟಡವಿದ್ದು, ಮಹಿಳೆಯರೇ ನಡೆಸುತ್ತಿರುವ ಈ ಸಂಸ್ಥೆ ರಾಜ್ಯಕ್ಕೆ ಮಾದರಿ ಎಂದು ಸಚಿವರು ಅಭಿನಂದಿಸಿದರು.
ನೇರ ನಡೆ, ನುಡಿಯ ಜನಾರ್ದನ ಪೂಜಾರಿ:
10 ವರ್ಷಗಳ ಹಿಂದೆ ಜನಾರ್ದನ ಪೂಜಾರಿ ಉದ್ಘಾಟಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ ಬೆಳವಣಿಗೆ ಕಾಣಲು ಪೂಜಾರಿ ಅವರ ನೇರ ನಡೆ ನುಡಿಕಾರಣ ಎಂದು ಸಚಿವ ಸೋಮಶೇಖರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮೈಸೂರು ಎಲೆಕ್ಟಿಕಲ್ ಇಂಡಸ್ಟಿಸ್‌ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್‌ರಾವ್, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಎಚ್. ಎಸ್. ಸಾಯಿರಾಮ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ ಮತ್ತು ರೂಪಶ್ರೀ ಪೂಜಾರಿ, ರೇವಣ್ಣ ಹಾಗೂ ಆತ್ಮಶಕ್ತಿ ಪತ್ರಿಕೆಯ ಸಂಪಾದಕರಾದ ವಾಮನ್ ಕೆ. ಉಪಸ್ಥಿತರಿದ್ದು, ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಸಂಘವು ೨೦೧೨ರ ಜ. ೩೦ರಂದು ಬೆಂದೂರ್‌ವೆಲ್‌ನ ಶ್ರೀಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭಗೊoಡಿದ್ದು, 10 ವರ್ಷಗಳ ಬಳಿಕ ಅದೇ ದಿನ ಪಡೀಲ್‌ನಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ. 20ನೇ ಶಾಖೆ ಇಲ್ಲಿ ಆರಂಭವಾಗಿದ್ದು, 19 ಶಾಖೆಗಳಲ್ಲಿ ಮಹಿಳೆಯರೇ ಮ್ಯಾನೇಜರ್‌ಗಳಾಗಿದ್ದಾರೆ. ಸಂಸ್ಥೆಯ ಶೇ. 95ರಷ್ಟುಉದ್ಯೋಗಿಗಳು ಮಹಿಳೆಯರು. 2020-21ನೇ ಸಾಲಿನಲ್ಲಿ 858 ಕೋಟಿ ರೂ. ವ್ಯವಹಾರದೊಂದಿಗೆ 1.41 ಕೋಟಿರೂ. ಲಾಭಗಳಿಸಿ ಪ್ರಾರಂಭದ ವರ್ಷದಿಂದಲೇ ಶೇ.15 ಡಿವಿಡೆಂಡ್ ನೀಡುತ್ತ ಬಂದಿದೆ ಎಂದರು.
ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಸಿಇಒ ಸೌಮ್ಯಾ ವಿಜಯ್ ವೇದಿಕೆಯಲ್ಲಿದ್ದರು.
ಆಡಳಿತ ಮಂಡಳಿ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ, ಆನಂದ್‌ಎಸ್. ಕೊಂಡಾಣ, ಸೀತಾರಾಮ್‌ಎನ್., ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ, ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ.ಪಿ., ಗೋಪಾಲ್ ಎಂ., ಚಂದ್ರಾವತಿ ಮತ್ತು ಉಮಾವತಿ ಸಹಕರಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.