ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಸದಸ್ಯರು ಹಾಗೂ ಗ್ರಾಹಕರಿಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡುವ ಕೋವಿಡ್-19 ವಿಶೇಷ ಚಿನ್ನಾಭರಣ ಸಾಲ ಯೋಜನೆಗೆ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ನಾಯಕ್ ಇವರು ಸಂಘದ ಪ್ರಧಾನ ಕಛೇರಿಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ನಾಯಕ್ ಇವರು ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಹಣಕಾಸಿನ ಅವಶ್ಯಕತೆ ಇರುವ ಸಂದರ್ಭದಲ್ಲಿ ಈ ಹೊಸ ಚಿಂತನೆಯು ಜನರಿಗೆ ಅನುಕೂಲವಾಗಲಿದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಆತ್ಮಶಕ್ತಿಯ ಈ ಯೋಜನೆಯು ಯಶಸ್ವಿಯಾಗಲೆಂದು ಶುಭಹಾರೈಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಕೊರೋನಾ ಮಹಾಮಾರಿಯಿಂದ ಜನರ ಆರ್ಥಿಕ ಸ್ಥಿತಿಗತಿಯು ತುಂಬಾ ಹದಗೆಟ್ಟಿದ್ದು ಜೊತೆಗೆ ಮಳೆಗಾಲವು ಆರಂಭವಾಗಿರುವುದರಿಂದ ಇನ್ನಷ್ಟು ಕುಗ್ಗಿಹೋಗಿದೆ. ಇಂತಹ ಸಂದರ್ಭದಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಭರಿಸುವುದು ಕಷ್ಟಕರವಾಗಿದ್ದು ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಶೇ.4ರ ಬಡ್ಡಿದರದಲ್ಲಿ ಗ್ರಾಹಕಸ್ನೇಹಿ ಸಾಲ ಯೋಜನೆಯ ಮೂಲಕ ಒಂದು ಲಕ್ಷ ರೂಪಾಯಿ ಸಾಲಕ್ಕೆ ಕೇವಲ 333/-ರೂಪಾಯಿ ತಿಂಗಳ ಬಡ್ಡಿ ಪಾವತಿಸುವ ಚಿನ್ನಾಭರಣ ಸಾಲ ಯೋಜನೆಯು ಉಪಯುಕ್ತವಾಗಲಿದೆ. ಹೆಚ್ಚು ಹೆಚ್ಚು ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಸಂಘದ ಪ್ರಧಾನ ಕಛೇರಿ ಶಾಖಾಧಿಕಾರಿ ಶ್ರೀಮತಿ ರವಿಕಲಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು. ಸಂಘದ ನಿರ್ದೇಶಕರಾದ ಶ್ರೀ ಸುರೇಶ್ ವಿ. ಪೂಜಾರಿ, ಚಂದ್ರಹಾಸ್ ಮರೋಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ(ಪ್ರ) ಶ್ರೀ ವಿಶ್ವನಾಥ ಉಪಸ್ಥಿತರಿದ್ದರು.