ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಸ್ಟೇಟ್ ಬ್ಯಾಂಕ್ ಶಾಖೆಯ ಐದನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದ ಸದಸ್ಯರಾದ ಶ್ರೀ ಕೃಷ್ಣಪ್ಪ ಪೂಜಾರಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಮಾತನಾಡಿ ಸಂಘವು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ಈಗಿನ ಡಿ.ಸಿ ಆಪೀಸ್ ಪಡೀಲ್‍ಗೆ ವರ್ಗಾವಣೆಗೊಳ್ಳುತ್ತಿದ್ದು ಪಡೀಲ್‍ನಲ್ಲಿಯೂ ಹೊಸ ಶಾಖೆ ತೆರೆಯುವ ಬಗ್ಗೆ ಪ್ರಸ್ತಾಪಿಸಿದರು.
ಸಂಘದ ಸಲಹೆ ಸಮಿತಿಯ ಸದಸ್ಯರಾದ ಶ್ರಿಯುತ ಸದಾನಂದ ಸುವರ್ಣ ಮಾತನಾಡಿ ಸಂಘವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ ಎಂದು ಹಾರೈಸಿದರು, ಮತ್ತೋರ್ವ ಸದಸ್ಯರಾದ ಡಾ. ಸೇಸಪ್ಪ ಅಮೀನ್ ಮಾತನಾಡಿ ಸಂಘದ ಗ್ರಾಹಕ ಸ್ನೇಹಿ ಸೇವೆ ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಮಾತನಾಡಿ ಗ್ರಾಹಕರಿಗೆ ತಮ್ಮ ವ್ಯಾಪಾರ ವ್ಯವಹಾರ ಪುನರಾರಂಭಿಸಲು ಅನಾನುಕೂಲವಾದ ಸಂದರ್ಭದಲ್ಲಿ ಕೇವಲ 4% ಬಡ್ಡಿದರದಲ್ಲಿ ಕೋವಿಡ್-19 ವಿಶೇಷ ಚಿನ್ನಾಭರಣ ಸಾಲವನ್ನು ಗ್ರಾಹಕರಿಗೆ ಕೇವಲ ಸೇವೆಯ ಉದ್ದೇಶದಿಂದ ಅತೀ ಕಡಿಮೇ ಬಡ್ಡಿಯಲ್ಲಿ ನೀಡಲಾಗಿದೆ ಹಾಗೂ ಈ ಸಾಲವು ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘದ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಕೊರೋನಾ ಸಂಕಷ್ಟದಲ್ಲೂ ಆತ್ಮಸ್ಥೈರ್ಯ ಹೆಚ್ಚಿಸಲು ಆತ್ಮಶಕ್ತಿಯು ಸಹಕಾರಿಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ,ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಸೆ.30ಕ್ಕೆ ಕೊನೆಗೊಂಡ ಪ್ರಸಕ್ತ ಸಾಲಿನ ಅರ್ಧ ವಾರ್ಷಿಕ ಆರ್ಥಿಕ ಅವಧಿಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ.
ಈ ಅವಧಿಯಲ್ಲಿ ಠೇವಣಾತಿ ರೂ. 117 ಕೋಟಿ, ಸಾಲ ಮತ್ತು ಮುಂಗಡ ರೂ. 100 ಕೋಟಿ ದಾಖಲಾಗಿದೆ. ಹಿಂದಿನ ವರ್ಷದ ಅರ್ಧ ವಾರ್ಷಿಕ ಅವಧಿಯ ಠೇವಣಾತಿಗಿಂತರೂ. 46 ಕೋಟಿ ಹೆಚ್ಚಳವಾಗಿದೆ, ಶೇ. 64 ರಷ್ಟು ವೃದ್ಧಿಸಿದೆ. ಹೊರಬಾಕಿ ಸಾಲದಲ್ಲಿ ರೂ. 38 ಕೋಟಿ ಹೆಚ್ಚಳ, ಶೇ.60 ರಷ್ಟು ವೃದ್ಧಿ ಹಾಗೂ ಒಟ್ಟು ವ್ಯವಹಾರದಲ್ಲಿ ರೂ.130 ಕೋಟಿ ಹೆಚ್ಚಳವಾಗಿ ಶೇ. 51 ರಷ್ಟು ವೃದ್ಧಿಯಾಗಿದೆ.ಹಾಗೂ ಈ ಸಂದರ್ಭದಲ್ಲಿ 50 ಕೋಟಿಗೂ ಹೆಚ್ಚು ಚಿನ್ನಾಭರಣ ಸಾಲವನ್ನು ನೀಡಲಾಗಿದೆ. ಈ ಕೊರೋನ ಮಹಾಮಾರಿಯ ಸಂಕಷ್ಟದ ಸಮಯದಲ್ಲೂ ಸಂಘದ ಮೇಲಿನ ಪ್ರೀತಿ ವಿಶ್ವಾಸದಿಂದ ಸಂಘದ ಬೆಳವಣಿಗೆಗೆ ಸಹಕರಿಸಿದ ಸಂಘದ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಕಾರ್ಯಬದ್ಧತೆಗೆ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‍ರವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಜಿ.ಪರಮೇಶ್ವರ್ ಪೂಜಾರಿ, ಶ್ರೀ ಚಂದ್ರಹಾಸ ಮರೋಳಿ, ಉಪಸ್ತಿತರಿದ್ದರು. ಸಂಘದ ಶಾಖಾಧಿಕಾರಿ ಶ್ರೀ ಸಚಿನ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರಿಮತಿ ಸೌಮ್ಯ ವಿಜಯ್ ವಂದಿಸಿದರು.