ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ದ 2019-20ನೇ ಸಾಲಿನ 9ನೇ ವಾರ್ಷಿಕ ಸಾಮಾನ್ಯ ಸಭೆಯು ಘನವೆತ್ತ ಕರ್ನಾಟಕ ರಾಜ್ಯ ಸರಕಾರದ ಆಜ್ಞಾನು ಪ್ರಕಾರ ವೀಡಿಯೋ ಕಾನ್ಫರೆನ್ಸ್/ವರ್ಚುವಲ್ ಮುಖಾಂತರ ದಿನಾಂಕ 18-12-2020 ರ ಶುಕ್ರವಾರ ಪೂರ್ವಾಹ್ನ 9.30 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದ 2019-20 ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಸಂಘವು 2019-20 ನೇ ಸಾಲಿನಲ್ಲಿ 17 ಶಾಖೆಗಳನ್ನು ಹೊಂದಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಸಹಿತ 5 ಜಿಲ್ಲೆಗಳಿಗೆ ವ್ಯಾಪಿಸಿರುತ್ತದೆ . ಸಂಘವು 2020-21 ನೇ ಆರ್ಥಿಕ ಸಾಲಿನಲ್ಲಿ ಇಂದಿನವರೆಗೆ ರೂ. 120 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು ಇದನ್ನು ಮಾರ್ಚ್ ಅಂತ್ಯಕ್ಕೆ ರೂ. 150 ಕೋಟಿ ಠೇವಣಿ ಸಂಗ್ರಹದ ಗುರಿಯನ್ನು ಸಾಧಿಸಿ ಇನ್ನೂ 2 ಶಾಖೆಗಳನ್ನು ತೆರೆಯಲಿದೆ ಎಂದು ಸಭೆಗೆ ತಿಳಿಸಿದರು. ಸಂಘದ ಆಡಳಿತ ಕಛೇರಿ ಹಾಗೂ ಹಾಸ್ಟೆಲ್ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದ್ದು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ದಶಮಾನೋತ್ಸವ ಸಂದರ್ಭದಲ್ಲಿ ಹತ್ತು ಸಾವಿರ ಚದರ ಅಡಿಯ ಸ್ವಂತ ಕಟ್ಟಡ ಹೊಂದುತ್ತಿರುವ ಜಿಲ್ಲೆಯ ಏಕೈಕ ಸಂಘ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.
ಸಂಘವು ವರದಿ ಸಾಲಿಗೆ ವಾರ್ಷಿಕ ವಹಿವಾಟು ರೂ. 535.99 ಕೋಟಿಗೂ ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ.118.76 ಲಕ್ಷ ಷೇರು ಬಂಡವಾಳ, ರೂ. 8433.37 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ. 7309.31 ಲಕ್ಷ ಸಾಲ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಠೇವಣಿ ಸಂಗ್ರಹಣೆಯಲ್ಲಿ ಶೇ.27.87 ರಷ್ಟು ಮತ್ತು ಸಾಲ ವಿತರಣೆಯಲ್ಲಿ ಶೇ.34.99 ರಷ್ಟು ವೃದ್ಧಿಯಾಗಿರುತ್ತದೆ. ಸಂಘದ ದುಡಿಯುವ ಬಂಡವಾಳವು ರೂ. 8879.92 ಲಕ್ಷ ಹೊಂದಿದೆ. ವರದಿ ವರ್ಷಕ್ಕೆ ಸಂಘವು ರೂ. 134.98 ಲಕ್ಷ ನಿವ್ವಳ ಲಾಭಗಳಿಸಿರುವುದು ಸಂಘದ ಹೆಗ್ಗಳಿಕೆ. ಸಂಘದ ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಡ್‍ನ್ನು ಈ ಸಭೆಯಲ್ಲಿ ಅಧ್ಯಕ್ಷರು ಘೋಷಿಸಿದರು.
ಆತ್ಮಶಕ್ತಿ ಸಹಕಾರಿ ಸಂಘವು ಸಹಕಾರ ರಂಗದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ನೆಹರು ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಸಂಘಕ್ಕೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವಾಂಗೀಣ ಸಾಧನೆಯನ್ನು ಪರಿಗಣಿಸಿ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಮ್ಮ ಸಂಘಕ್ಕೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರ ಜೊತೆಗೆ ಅಖಿಲ ಭಾರತ ಸಹಕಾರಿ ಸಪ್ತಾಹ – 2020 ರಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡ ರಾಜ್ಯದ ಏಕಮಾತ್ರ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 66ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಸಂಘಕ್ಕೆ “ಉತ್ತಮ ಸಹಕಾರ ಸಂಘ ಪ್ರಶಸ್ತಿ”ಯನ್ನು ಪ್ರದಾನ ಮಾಡಲಾಗಿದೆ. ಸಂಘವು ಸತತ 3 ವರ್ಷಗಳಿಂದ ಈ ಪ್ರಶಸ್ತಿಗೆ ಭಾಜನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ “ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ 2019-20” ಈ ಬಾರಿಯೂ ಸಂಘವು ಪಡೆದಿದ್ದು, ಸತತ 5 ವರ್ಷಗಳಿಂದ ಈ ಪ್ರಶಸ್ತಿಗೆ ಭಾಜನವಾಗಿದೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಾಮನ್.ಕೆ, ಶ್ರೀ ರಾಮ್‍ದಾಸ್ ಮರೋಳಿ,ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸುರೇಶ್ ವಿ. ಪೂಜಾರಿ, ಶ್ರೀ ಸೀತಾರಾಮ ಎನ್, ಶ್ರೀ ರಮಾನಾಥ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ ಮತ್ತು ಶ್ರೀಮತಿ ಕುಶಾಲಾಕ್ಷಿ ಯಶವಂತ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ರವರು ವಂದಿಸಿದರು.