ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವತಿಯಿಂದ ಹಿಂದೂ ಯುವಸೇನೆ ಓಂ ಶಕ್ತಿ ಶಾಖೆ, ಎಕ್ಕೂರು, ಮಂಗಳೂರು ಹಾಗೂ ಅಯ್ಯಪ್ಪ ಭಜನಾ ಮಂಡಳಿ, ಹಿಂದೂಪುರ , ಎಕ್ಕೂರು, ಮಂಗಳೂರು ಇವರ ಆಶ್ರಯದಲ್ಲಿ ಕರ್ನಾಟಕ ಒನ್ ಸೇವಾ ಸಂಸ್ಥೆಯ ಮೂಲಕ ಉಚಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವು ಅಯ್ಯಪ್ಪ ಭಜನಾ ಮಂಡಳಿ, ಹಿಂದೂಪುರ , ಎಕ್ಕೂರಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ್ ಪಾಂಡೇಶ್ವರ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಹಿಂದೂ ಯುವಸೇನೆಯು ಜನಪರ ಕಾಳಜಿಯಿಂದ ಉಚಿತ ಆಂಬುಲೆನ್ಸ್, ರಕ್ತದಾನ ಶಿಬಿರ, ಆರೋಗ್ಯ ಕಾರ್ಡ್ ವಿತರಣೆಯಂತಹ ಕಾರ್ಯಕ್ರಮವನ್ನು ಮಾಡುವುದು ಪ್ರಶಂಸನೀಯ, ಅಂತೆಯೇ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೂಡ ಕೇವಲ ತನ್ನ ವ್ಯವಹಾರದ ಪ್ರಗತಿಯನ್ನಷ್ಟೇ ನೋಡದೆ ಬಡ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ, ಸಮಾಜ ಪರ ಕಾಳಜಿಯನ್ನಿಟ್ಟುಕೊಂಡು ಅನಾರೋಗ್ಯ ಪೀಡಿತ ಬಡ ಕುಟುಂಬಗಳಿಗೆ ಸಹಾಯಹಸ್ತ, ಸಮಾಜದ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿಕೊಂಡು ಇಂತಹ ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘವು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈವರೆಗೆ ಸುಮಾರು 32 ಕ್ಕೂ ಮಿಕ್ಕಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದು , ಮುಂದೆಯೂ ಕೇವಲ ಬ್ಯಾಂಕಿಂಗ್ ವ್ಯವಹಾರವನ್ನಷ್ಟೇ ಕೇಂದ್ರೀಕರಿಸದೆ ಸಂಘದ ಗ್ರಾಹಕರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು ಹಾಗೂ ಈ ಕಾರ್ಯಕ್ರಮವನ್ನು ಆಯೋಜಿಸಲು ಕೈ ಜೋಡಿಸಿದ ಹಿಂದೂ ಯುವಸೇನೆ ಓಂ ಶಕ್ತಿ ಶಾಖೆ ಹಾಗೂ ಅಯ್ಯಪ್ಪ ಭಜನಾ ಮಂಡಳಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ನಿರ್ದೇಶಕರಾದ ಶ್ರೀ ಸುರೇಶ್ ವಿ. ಪೂಜಾರಿ , ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಭಾಸ್ಕರ್ ಚಂದ್ರ ಶೆಟ್ಟಿ, ಹಾಗೂ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಶ್ರೀ ಯಶೋಧರ ಚೌಟ, ಹಿಂದೂ ಯುವಸೇನೆ ಓಂ ಶಕ್ತಿ ಶಾಖೆಯ ಗೌರವಾಧ್ಯಕ್ಷರಾದ ಶ್ರೀನಿವಾಸ ಎಕ್ಕೂರು, ಮಾರ್ಗದರ್ಶಕರಾದ ಶ್ರೀ ಧನಂಜಯ, ಅಯ್ಯಪ್ಪ ಭಜನಾ ಮಂಡಳಿ, ಎಕ್ಕೂರಿನ ಅಧ್ಯಕ್ಷರಾದ ಶ್ರೀ ಜಯ ಶೆಟ್ಟಿ, ಅಬಕಾರಿ ವಿಭಾಗದ ಇನ್ಸ್‍ಪೆಕ್ಟರ್ ಆದ ಶ್ರೀ ಮನೋಹರ್, ಹಾಗೂ ನಂದಾದೀಪ ಮಹಿಳಾ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ತೇಜಸ್ವಿನಿ ಬಿ. ಆಚಾರ್ಯ ರವರು ಉಪಸ್ಥಿತರಿದ್ದರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಲೆಕ್ಕಿಗರಾದ ಶ್ರೀ ವಿಶ್ವನಾಥ್ ರವರು ಸ್ವಾಗತಿಸಿದರು, ಹಿಂದೂ ಯುವಸೇನೆ ಓಂ ಶಕ್ತಿ ಶಾಖೆಯ ಸದಸ್ಯೆಯಾದ ಶ್ರೀಮತಿ ರೇಖಾ ಶೆಟ್ಟಿ ಯವರು ವಂದಿಸಿದರು ಹಾಗೂ ಹಿಂದೂ ಯುವಸೇನೆ ಓಂ ಶಕ್ತಿ ಶಾಖೆಯ ಸದಸ್ಯರಾದ ಶ್ರೀ ಪ್ರಜ್ವಲ್ ಹಾಗೂ ಶ್ರೀ ಪ್ರಶಾಂತ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.