ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ಬೆಂದೂರ್‍ವೆಲ್, ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಚಿನ್ನದ ನೈಜತೆಯ ಪರೀಕ್ಷಾ ಯಂತ್ರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

ಚಿನ್ನದ ನೈಜತೆಯ ಪರೀಕ್ಷಾ ಯಂತ್ರವನ್ನು ಕದ್ರಿ POLICE ಠಾಣಾಧಿಕಾರಿ ಸವಿತ್ರ ತೇಜಾ ಪಿ.ಡಿ. ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಚಿನ್ನ ಶುದ್ಧತೆಯನ್ನು ಪರೀಕ್ಷಿಸುವ ಯಂತ್ರದ ಮೇಲಿನ ಬಂಡವಾಳ ಅಧಿಕವಾಗಿದ್ದರೂ ಭವಿಷ್ಯದಲ್ಲಿ ಮೋಸಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ಸಂಘವೊಂದು ಈ ಯಂತ್ರವನ್ನು ಅಳವಡಿಸಿದ್ದು ಮೆಚ್ಚುವಂತದ್ದು, ಈ ಯಂತ್ರವನ್ನು ಅಳವಡಿಸಿದ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಕಾರ್ಯವನ್ನು ಪ್ರಸಂಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ವಕರ್ಮ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಹರೀಶ್ ಆಚಾರ್ಯರವರು ಮಾತನಾಡಿ ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆಯುವ ಜಾಲವು ಸಕ್ರಿಯವಾಗಿದ್ದು, ಭವಿಷ್ಯದಲ್ಲಿ ನಕಲಿ ಚಿನ್ನದಿಂದ ಮೋಸಹೋಗುವುದನ್ನು ತಪ್ಪಿಸಲು ಲಾಭದಾಯಕವಲ್ಲದಿದ್ದರೂ ಚಿನ್ನ ಪರೀಕ್ಷಾ ಯಂತ್ರದ ಅಳವಡಿಕೆ ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‍ರವರು ಭಾರತ ಸರ್ಕಾರದ ಅಟೊಮಿಕ್ ಎನೆರ್ಜಿ ರೆಗುಲೇಟರಿ ಬೋರ್ಡ್ ಇವರಿಂದ ಪ್ರಮಾಣಿಕೃತವಾಗಿದ್ದು ಹಾಗೂ ಚಿನ್ನಾಭರಣಗಳು ಯಾವುದೇ ರೀತಿ ಹಾನಿಕಾರಕವಲ್ಲದ ಪರಿಶುದ್ಧತೆಯನ್ನು ನಿಖರವಾಗಿ ನೀಡಬಲ್ಲ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಉತ್ಕೃಷ್ಟ ದರ್ಜೆಯ ಯಂತ್ರ ಇದಾಗಿದ್ದು, ಈ ಯಂತ್ರವನ್ನು ಸಂಘವು ಈಗಾಗಲೇ ತನ್ನ ಹೆಚ್ಚಿನ ಶಾಖೆಗಳಲ್ಲಿ ಅಳವಡಿಸುವುದರ ಮೂಲಕ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕನಿಷ್ಠ ದರದೊಂದಿಗೆ ಈ ಸೇವೆಯನ್ನು ನೀಡಲಿದ್ದು ಸದಸ್ಯರು ಮಾತ್ರವಲ್ಲದೇ ಸಾರ್ವಜನಿಕರು ಹಾಗೂ ಚಿನ್ನಾಭರಣ ತಯಾರಕರು ಈ ಸೇವೆಯ ಸದುಪಯೋಗ ಪಡೆಯಬೇಕೆಂದು ಕೋರಿದರು. ಈ ಯಂತ್ರವನ್ನು ಅಳವಡಿಸುವುದರ ಮೂಲಕ ಹೊಸ ಆಭರಣ ಸಾಲ “ಒಂದು ನಿಮಿಷದಲ್ಲಿ ಚಿನ್ನಾಭರಣ ಸಾಲ” ಎನ್ನುವ ಯೋಜನೆಯನ್ನು ಪ್ರಾರಂಬಿಸಲಿದ್ದು ಇದು ಗ್ರಾಹಕ ಸ್ನೇಹಿ ಸಾಲವಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ವಾಮನ್ ಕೆ., ಸುರೇಶ್ ವಿ. ಪೂಜಾರಿ, ಸೀತಾರಾಮ್ ಎನ್., ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಕಾರ್ಯಕ್ರಮ ನಿರೂಪಿಸಿದರು, ಸಂಘದ ಲೆಕ್ಕಾಧಿಕಾರಿ ವಿಶ್ವನಾಥ್ ವಂದಿಸಿದರು.