ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ನಾಯಕ್ ಇವರು ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಹಣಕಾಸಿನ ಅವಶ್ಯಕತೆ ಇರುವ ಸಂದರ್ಭದಲ್ಲಿ ಸುಲಭ ದರದಲ್ಲಿ ಸಿಗುವಂತಹ ಸಾಲ ಸೌಲಭ್ಯವು ಕೆಳವರ್ಗದ ಸದಸ್ಯರಿಗೆ ಪರಿಣಾಮಕಾರಿಯಾಗಿ ಉಪಕಾರಿಯಾಗಲಿದೆ. ಕಳೆದ ವರ್ಷ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ ರೂಪಾಯಿ 40 ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲ ನೀಡಿ ಸಹಕಾರಿ ರಂಗದ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಕೊರೊನಾ 2ನೇ ಅಲೆಯಿಂದ ಲಾಕ್ಡೌನ್ನ ಈ ಪರಿಸ್ಥಿತಿಯಲ್ಲಿ ವ್ಯಾಪಾರ ಹಾಗೂ ಕೆಲಸವು ಇಲ್ಲದೆ ಜನರ ಆರ್ಥಿಕ ಸ್ಠಿತಿಗತಿಯು ತುಂಬಾ ಹದೆಗಟ್ಟಿದ್ದು, ಜೊತೆಗೆ ಮಳೆಗಾಲವು ಆರಂಭವಾಗಿರುವುದರಿಂದ ಆರ್ಥಿಕ ಸ್ಥಿತಿಯು ಇನ್ನಷ್ಟು ಕುಗ್ಗಿ ಹೋಗಿದೆ. ಜನರು ಅವರ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ಹಾಗೂ ವ್ಯಾಪಾರದಲ್ಲಿ ಪುನ: ಬಂಡವಾಳ ತೊಡಗಿಸಲು ಪರದಾಡುವ ಈ ಪರಿಸ್ಥಿತಿಯಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಭರಿಸುವುದು ಕಷ್ಟಕರವಾಗಿದ್ದು, ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಶೇ.4 ರ ಬಡ್ಡಿದರದಲ್ಲಿ ಗ್ರಾಹಕ ಸ್ನೇಹಿ ಸಾಲ ಯೋಜನೆಯ ಮೂಲಕ ಒಂದು ಲಕ್ಷ ರೂಪಾಯಿ ಸಾಲಕ್ಕೆ ಕೇವಲ 333/- ರೂಪಾಯಿ ತಿಂಗಳ ಬಡ್ಡಿ ಪಾವತಿಸುವ ಚಿನ್ನಾಭರಣ ಸಾಲ ಯೋಜನೆಯು ಉಪಯುಕ್ತವಾಗಲಿದೆ. ಹೆಚ್ಚಿನ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಚಂದ್ರಹಾಸ ಮರೋಳಿ ಉಪಸ್ಥಿತರಿದ್ದರು. ಸಂಘದ ಶಾಖಾಧಿಕಾರಿ ಶ್ರೀಮತಿ ರವಿಕಲಾರವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ವಂದಿಸಿದರು.