ಸಂಘದ 2021-22ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರು ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 23 ಶಾಖೆಗಳನ್ನು ಹೊಂದಿದ್ದು, ಸಂಘದ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 30 ಶಾಖೆಗಳನ್ನು ತೆರೆದು, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.200 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ.160 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ ಸಂಘದ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿಶೇಷ ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡುವ ಹೊಸ ಯೋಜನೆಯನ್ನು ರೂಪಿಸಿ, ಅಳವಡಿಸಿಕೊಳ್ಳಲಾಗುವುದೆಂದು ಘೋಷಣೆ ಮಾಡಿದರು.
ಸಂಘವು ವರದಿ ಸಾಲಿಗೆ ವಾರ್ಷಿಕ ವಹಿವಾಟು ರೂ.1364.05 ಕೋಟಿಗೂ ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ.126.61 ಲಕ್ಷ ಷೇರು ಬಂಡವಾಳ, ರೂ.17,604.41 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ.13,083.21 ಲಕ್ಷ ಸಾಲ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಠೇವಣಿ ಸಂಗ್ರಹಣೆಯಲ್ಲಿ ಶೇ. 28.34 ರಷ್ಟು ಮತ್ತು ಸಾಲ ವಿತರಣೆಯಲ್ಲಿ ಶೇ.16.33 ರಷ್ಟು ವೃದ್ಧಿಯಾಗಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ.18,310.26 ಲಕ್ಷ ಹೊಂದಿದೆ. ವರದಿ ವರ್ಷಕ್ಕೆ ಸಂಘವು ರೂ. 149.45 ಲಕ್ಷ ನಿವ್ವಳ ಲಾಭಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ.10 ಡಿವಿಡೆಂಡ್ ಘೋಷಿಸಲಾಯಿತು.
ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇವರಿಂದ 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ಮೊತ್ತದ ಇ-ಸ್ಟಾಂಪಿಂಗ್ ಮುದ್ರಿಸುವ ಪ್ರಶಸ್ತಿಯನ್ನು ಸಂಘ ಪಡೆದಿರುತ್ತದೆ. ಸದಸ್ಯರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವುದರ ಜೊತೆಗೆ ಸಂಘದ ಕಾರ್ಯವೈಖರಿಯನ್ನು ಗುರುತಿಸಿ ಸತತ 7 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ “ಸಾಧನಾ ಪ್ರಶಸ್ತಿ” ಸಹಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಇವರಿಗೆ ಕರ್ನಾಟಕ ಸರಕಾರ 2021ನೇ ಸಾಲಿನ “ಸಹಕಾರ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಸಭೆಯಲ್ಲಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಪುರಸ್ಕಾರ:
ಸಂಘದ ಸದಸ್ಯರಾದ ಡಾ. ಸೇಸಪ್ಪ ಆಮೀನ್ ಕೆ. ಹಾಗೂ ಡಾ.ಮೀರಾರವರು ಡಾಕ್ಟರೇಟ್ ಪದವಿ ಪಡೆದಿದ್ದು ಅವರನ್ನು ಈ ಸಂದರ್ಭದಲ್ಲಿ ಸಂಘದ ಪರವಾಗಿ ಅಭಿನಂದಿಸಲಾಯಿತು. ಸಂಘದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ 15ಕ್ಕೂ ಹೆಚ್ಚು ಸದಸ್ಯರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ 20ಕ್ಕೂ ಹೆಚ್ಚು ಸಂಘದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ಜಿ.ಪರಮೇಶ್ವರ ಪೂಜಾರಿ sಶ್ರೀ ಆನಂದ್ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಮ್. ಶ್ರೀಮತಿ ಚಂದ್ರಾವತಿ ಮತ್ತು ಶ್ರೀಮತಿ ಉಮಾವತಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು. ಅಭಿನಂದನಾ ಪುರಸ್ಕಾರ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕ ಸನಿಲ್ ರವರು ನಿರೂಪಿಸಿದರು.