ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ 7ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.


ಉದ್ಘಾಟನೆ ಮಾತುಗಳನ್ನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರು ಸಂಘದ ಬೆಳವಣಿಗೆ ಹಾಗೂ ಉತ್ತಮ ಸೇವೆಯಿಂದ ಇಂದು ಆತ್ಮಶಕ್ತಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸತತವಾಗಿ ಸಂಘವು ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ, ಸದರಿ ಶಾಖೆಯಲ್ಲಿ ಇ-ಸ್ಟಾಂಪ್ ಸೇವೆಯು ಸಂಜೆ 7 ಗಂಟೆಯವರೆಗೆ ಲಭ್ಯವಿದ್ದು, ಸದಸ್ಯರು ಬ್ಯಾಂಕಿಂಗ್ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಮುಂಬರುವ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಸಂಘವು ಕಾರ್ಯಚರಿಸಲಿದೆ, ಈ ನಿಟ್ಟಿನಲ್ಲಿ ಸಂಘವು ಯೋಜನೆಗಳನ್ನು ಹಮ್ಮಿಗೊಂಡಿದೆ ಎಂದರು.

ಸಂಘದ ಸದಸ್ಯರಾದ ಶ್ರೀ ರಂಜಿತ್ ಎಮ್ ರವರು ಮಾತನಾಡಿ ಸಂಘವು ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ಪ್ರಶಂಶಿಸಿದರು ಹಾಗೂ ಸದಸ್ಯರಾದ ಶ್ರೀಧರ್ ರವರು ಮಾತನಾಡಿ ಆತ್ಮಶಕ್ತಿ ಸಂಘವು ಬೆಳೆದರೆ ನಾವು ಬೆಳೆದ ಹಾಗೇ ಎಂದು ಸಂತಸವನ್ನು ವ್ಯಕ್ತಪಡಿಸಿದರು. ಸದಸ್ಯರಾದ ಶ್ರೀ ರಾಮಕೃಷ್ಣ ಜಿ. ರವರು ಸಂಘದ ಸಿಬ್ಬಂದಿಗಳ ನಗು ಮುಖದ ಸೇವೆಯಿಂದ ಸಂಘವು 100 ಶಾಖೆಯನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ಗೋಪಾಲ್ ಎಮ್. ಮತ್ತಿತರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ರವರು ವಂದಿಸಿದರು. ಶಾಖಾಧಿಕಾರಿ ಕುಮಾರಿ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು.