ಶಿಬಿರದ ಕಾರ್ಯಕ್ರಮವನ್ನು ಪಡುಬಿದ್ರಿ ವ್ಯವಸಾಹಿಕ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀ ವೈ ಸುಧೀರ್ ಕುಮಾರ್ ಉದ್ಘಾಟಿಸಿ ಮಾತನಾಡಿ “ಸಹಕಾರಿ ಸಂಸ್ಥೆಗಳು ಕೇವಲ ಲಾಭದ ದೃಷ್ಟಿಯನ್ನು ಹೊಂದದೆ ಜನರ ಆರೋಗ್ಯ ದೃಷ್ಟಿಯಿಂದಲೂ ಉಚಿತವಾಗಿ ಸಾರ್ವಜನಿಕರಿಗೆ ಇಂತಹ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಉತ್ತಮ ಗುಣಮಟ್ಟದಲ್ಲಿ ನೀಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆಲಸ ಶ್ಲಾಘನೀಯ. ಆತ್ಮಶಕ್ತಿಯ ಪಡುಬಿದ್ರಿಯ ಶಾಖೆಯ ಉದ್ಘಾಟನೆಯ ಸಂದರ್ಭದಲ್ಲಿ ನಾನು ಪಡುಬಿದ್ರಿಯ ಜನತೆಗೆ ಉಪಯುಕ್ತವಾಗುವ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‍ರವರಲ್ಲಿ ಪಡುಬಿದ್ರಿಯ ಜನತೆ ಪರವಾಗಿ ವಿನಂತಿಸಿದ್ದೆ. ಇಂದು ನನ್ನ ಕೋರಿಕೆಯನ್ನು ಈಡೇರಿಸಿದ್ದಕ್ಕೆ ಗ್ರಾಮದ ಜನತೆಯ ಪರವಾಗಿ ಆತ್ಮಶಕ್ತಿಗೆ ಕೃತಜ್ಞತೆಗಳು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‍ರವರು “ನಮ್ಮ ಸಂಸ್ಥೆಯ ಶಾಖೆಯಿರುವ ಪ್ರತಿ ಗ್ರಾಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ನಡೆಸುತ್ತಿರುವ 52 ನೇ ಉಚಿತ ವೈದ್ಯಕೀಯ ಶಿಬಿರವಾಗಿದ್ದು, ಮುಂದೆಯೂ ಪ್ರತಿ ವರ್ಷವೂ ನಿರಂತರವಾಗಿ ಗ್ರಾಹಕರ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಂತಹ ಶಿಬಿರವನ್ನು ನಡೆಸಲಿದ್ದೇವೆ. ಶಾಲಾ ಮಕ್ಕಳಿಗೆ ರಕ್ತ ವರ್ಗೀಕರಣವನ್ನು ಕೂಡಾ ಈ ಶಿಬಿರದಲ್ಲಿ ನಡೆಸುತ್ತಿದ್ದೇವೆ. ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ನಿರಂತರವಾಗಿ ಇರಲಿ ಎಂದು ನುಡಿದರು.
ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ನವೀನ್‍ಚಂದ್ರ ಶೆಟ್ಟಿ ಮಾತನಾಡಿ ಉಭಯ ಜಿಲ್ಲೆಗಳಲ್ಲಿ ಹಲವಾರು ಶಾಖೆಗಳನ್ನು ಹೊಂದಿದ್ದು, ಸಂಸ್ಥೆಯ ಲಾಭಾಂಶದ ಒಂದು ಪಾಲನ್ನು ಸಮಾಜದ ಅಶಕ್ತ ಬಡ ವರ್ಗದ ಜನರ ಏಳಿಗೆಗಾಗಿ ವಿನಿಯೋಗಿಸಿಕೊಂಡು ಬರುತ್ತಿದ್ದು, ಸಂಸ್ಥೆಯು ಅಭಿವೃದ್ದಿ ಪಥದಲ್ಲಿ ಸಾಗಲಿ, ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು.
ಗ್ರಾಮ ಪಂಚಾಯತ್ ಪಡುಬಿದ್ರಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ವೈ. ಸುಕುಮಾರ್ ಮಾತನಾಡಿ ದಾನಗಳಲ್ಲಿ ಶ್ರೇಷ್ಟವಾದ ದಾನಗಳೆಂದರೆ ಅನ್ನದಾನ, ರಕ್ತದಾನ ಹಾಗೂ ನೇತ್ರದಾನ. ಅದೇ ರೀತಿ ಆತ್ಮಶಕ್ತಿ ಬ್ಯಾಂಕಿಂಗ್ ಜೊತೆಗೆ ಇಂತಹ ಉಚಿತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಉತ್ತಮ ರೀತಿಯ ಸೇವೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವೆಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪಡುಬಿದ್ರಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ಪಿ. ಕೃಷ್ಣ ಬಂಗೇರ ಇವರು ಮಾತನಾಡಿ ಉಚಿತ ರಕ್ತ ವರ್ಗೀಕರಣ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳು ಇದರ ಸದುಪಯೋಗ ಪಡೆಯಬೇಕೆಂದರು.
ರೋಟರಿ ಕ್ಲಬ್ ಪಡುಬಿದ್ರಿ ಇದರ ಅಧ್ಯಕ್ಷರಾದ ರೊ ಶ್ರೀಮತಿ ಗೀತಾ ಅರುಣ್ ಇವರು ಶಿಬಿರಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ರಮಾನಾಥ್ ಸನಿಲ್, ಶ್ರೀ ಬಿ.ಪಿ ದಿವಾಕರ್, ಶ್ರೀ ಗೋಪಾಲ್ ಎಮ್, ಶ್ರೀಮತಿ ಉಮಾವತಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್, ರೋಟರಿ ಕ್ಲಬ್ ಪಡುಬಿದ್ರಿ ಇದರ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಮೆನನ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಮುಖ್ಯೋಪಾದ್ಯಯರಾದ ಶ್ರೀ ಕೃಷ್ಣಯ್ಯ, ಮಾತಾ ಅಮ್ರತಾನಂದಮಯಿ ಮಠ ಬೋಳೂರು, ಮಂಗಳೂರು ಇಲ್ಲಿನ ವೈದ್ಯರಾದ ಡಾ| ಸುಚಿತ್ರಾ ಸೊರಕೆ ಹಾಗೂ ಡಾ. ದೇವದಾಸ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇಲ್ಲಿನ ವೈದ್ಯರಾದ ಡಾ. ಅಕ್ಷತಾ, ಶ್ರೀನಿವಾಸ್ ಇನ್ಸ್‍ಟ್ಯೂಟಲ್ ಸಾಯನ್ಸ್ ಮುಕ್ಕ ಇಲ್ಲಿನ ವೈದ್ಯರಾದ ಡಾ. ಆಧ್ರಾ, ವೆನ್ಲಾಕ್ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಜಾಯ್ಸನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪದ್ಮಿನಿ ತಂತ್ರಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 350 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಪ್ರಾಯೋಜನವನ್ನು ಪಡೆದುಕೊಂಡರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವತಿಯಿಂದ ಸುಮಾರು 130 ಶಾಲೆ ವಿದ್ಯಾರ್ಥಿಗಳಿಗೆ ರಕ್ತ ಗುಂಪಿನ ವರ್ಗೀಕರಣವನ್ನು ನಡೆಸಲಾಯಿತು. ಸುಮಾರು 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಆತ್ಮಶಕ್ತಿ ಸಂಘದ ವತಿಯಿಂದ ಉಚಿತ ಕನ್ನಡಕವನ್ನು ವಿತರಿಸಲಾಯಿತು.
ಪಡುಬಿದ್ರಿ ಶಾಖೆಯ ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸ್ವಾತಿರವರು ಸ್ವಾಗತಿಸಿ, ರೋಟರಿ ಕ್ಲಬ್ ಪಡುಬಿದ್ರಿ ಇದರ ನಿಯೋಜಿತ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್‍ರವರು ವಂದಿಸಿದರು. ಸಂಘದ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕ ಸನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಚಿತ ನೇತ್ರ ತಪಾಸಣಾ, ದಂತ ಚಿಕಿತ್ಸಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರದ ಸಂಯೋಜನೆಯನ್ನು ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ರವಿಕಲರವರು ನಡೆಸಿದರು.