ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಮಂಗಳೂರು ಇವರ ಸಹಯೋಗದೊಂದಿಗೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ,ಚಿಕ್ಕಮಗಳೂರು ,ಉಡುಪಿ,ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಂಗಣ “ಆತ್ಮಶಕ್ತಿ ಸೌಧ”, ಪಡೀಲ್ ಮಂಗಳೂರು ಇಲ್ಲಿ ನಡೆಸಲಾಯಿತು.


ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ. ಹರೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಸಹಕಾರ ಕ್ಷೇತ್ರದಲ್ಲಿ ಸಂಘಗಳ ಪ್ರಗತಿಗೆ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊಡುಗೆ ಅಪಾರವಾದುದ್ದು, ಸಾಲ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದರೆ ಮಾತ್ರ ಸಂಘ ಲಾಭದಾಯಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಇಂತಹ ಕಾರ್ಯಗಾರವನ್ನು ಆಯೋಜಿಸಿದ್ದಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ವಿ ರಾಜುರವರು ಮಾತನಾಡಿ ಸಹಕಾರ ಸಂಘಗಳ ಉನ್ನತಿಗೆ ಇಂತಹ ತರಬೇತಿಗಳ ಅಗತ್ಯವಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಮಹಾಮಂಡಳದ ವತಿಯಿಂದ ಹಮ್ಮಿಕೊಳ್ಳಲಾಗುವುದು. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ ನಿರ್ದೇಶಕರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಮಂಗಳೂರಿನಲ್ಲಿ ಈ ತರಬೇತಿ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ಮೈಸೂರು ವಿಭಾಗದ ಅಧ್ಯಕ್ಷರಿಗೆ ಮತ್ತು ಆಡಳಿತ ಮಂಡಳಿ ನಿರ್ದೇಶಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ೩ನೇ ವಲಯದ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಸಲೀಂ ಬಿ. ಕೆ. ರವರು ಸಾಲದ ಮೌಲ್ಯಾಂಕನ ಮತ್ತು ವಸೂಲಾತಿ ಪ್ರಕ್ರಿಯೆ ಕುರಿತು ಉಪನ್ಯಾಸ ನೀಡಿದರು ಹಾಗೂ ಲೆಕ್ಕ ಪರಿಶೋಧಕರಾದ ಶ್ರೀ ಮಧುಕರ್ ಜಿ ಹೆಗ್ಡೆ ಇವರಿಂದ ಸಹಕಾರ ಸಂಘಗಳ ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಕುರಿತು ಉಪನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಶ್ರೀ ವಿ ರಾಜುರವರನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪರವಾಗಿ ಸನ್ಮಾನಿಸಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರುಗಳಾದ ಶ್ರೀ ಬಿ.ಪಿ.ದಿವಾಕರ್, ಶ್ರೀ ಗೋಪಾಲ್ ಎಂ, ಶ್ರೀಮತಿ ಉಮಾವತಿ, ಸಂಘದ ಸಲಹೆಗಾರರಾದ ಶ್ರೀ ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ತರಬೇತಿ ಕಾರ್ಯಗಾರದಲ್ಲಿ ಮೈಸೂರು ವಿಭಾಗ ಮಟ್ಟದ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.
ಈ ಕಾರ್ಯಕ್ರಮವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್‌ರವರು ಸ್ವಾಗತಿಸಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಪ್ರಜ್ವಲ್ ಕೆ ವಂದಿಸಿದರು. ಸಿಬ್ಬಂದಿಯಾದ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.